ಶ್ರೀ ಅರವಿಂದರ ಬೋಧನೆ
ಯೂಟ್ಯೂಬ್ನಲ್ಲಿ ವೀಕ್ಷಿಸಿ (YouTube): https://youtu.be/cXtCazKPMT0
ಶ್ರೀ ಅರವಿಂದರ ಬೋಧನೆಯ ಪ್ರಾರಂಭವಾಗುವುದು ಪುರಾತನ ಭಾರತದ ಋಷಿಗಳ ಪ್ರಕಾರ ಗೋಚರ ಜಗತ್ತಿನ ತೋರಿಕೆಗಳ ಹಿಂದೆ ಪರಮಸತ್ತೆ ಮತ್ತು ಚೇತನದ ವಾಸ್ತವಿಕತೆ ಇರುತ್ತದೆ ಎಂಬುದರ ಮೂಲಕ, ಎಲ್ಲ ವಸ್ತುಗಳ ನಿಜ ಆತ್ಮ ಒಂದೇ ಮತ್ತು ಅನಂತವಾಗಿದೆ. ಸಕಲ ಸತ್ತೆಗಳು ಆ ಏಕಮೇವ ಆತ್ಮ ಮತ್ತು ಚೈತನ್ಯದಲ್ಲಿ ಏಕತೆಯನ್ನು ಹೊಂದಿವೆ ಆದರೆ ಚೇತನದ ಯಾವುದೊಂದು ವಿಭಾಜಕತೆಯಿಂದ ಬೇರೆಯಾಗಿವೆ, ಮನ, ಪ್ರಾಣ ಮತ್ತು ದೇಹದಲ್ಲಿ ಅವುಗಳ ನಿಜ ಆತ್ಮ ಮತ್ತು ವಾಸ್ತವಿಕತೆಯ ಅಜ್ಞಾನತೆ. ಕೆಲವೊಂದು ಮನೋವೈಜ್ಞಾನಿಕ ಶಿಸ್ತಿನಿಂದ ವಿಭಾಜಕತೆಯ ಚೇತನೆಯ ಪರದೆಯನ್ನು ತೆಗೆದು ಹಾಕಬಹುದು ಮತ್ತು ನಮ್ಮೊಳಗಿನ ಹಾಗೂ ಎಲ್ಲರೊಳಗಿನ ನಿಜ ಆತ್ಮ ಮತ್ತು ದೈವತ್ವದ ಅರಿವನ್ನು ಪಡೆಯಬಹುದು.
ಶ್ರೀ ಅರವಿಂದರ ಬೋಧನೆ ತಿಳಿಸುವುದೇನೆಂದರೆ ಈ ಏಕೈಕ ಸತ್ತೆ ಮತ್ತು ಚೇತನೆಯು ಇಲ್ಲಿ ದ್ರವ್ಯದಲ್ಲಿ ಅಡಕವಾಗಿದೆ. ಅದು ತನ್ನನ್ನು ತಾನು ವಿಕಾಸಕ್ರಮದ ಪದ್ದತಿಯ ಮುಖಾಂತರ ಮುಕ್ತಗೊಳಿಸುತ್ತದೆ; ಅಚೇತನವೆಂದು ತಿಳಿಯುವದರಲ್ಲಿ ಚೇತನೆಯು ಕಾಣಿಸಿಕೊಳ್ಳುತ್ತದೆ, ಮತ್ತು ಒಂದು ಬಾರಿ ಅದು ಕಾಣಿಸಿಕೊಂಡ ನಂತರ ಅದು ಹೆಚ್ಚೆಚ್ಚು ಬೆಳೆಯಲು ಮತ್ತು ಅದೇ ಸಮಯದಲ್ಲಿ ಉನ್ನತದಿಂದ ಅತ್ಯುನ್ನತ ಮಟ್ಟಕ್ಕೆ ವೃದ್ಧಿಸಲು ಹಾಗೂ ಕ್ರಮಾಗತ ಪರಿಪೂರ್ಣತೆಗೆ ಏರಲು ಸ್ವ-ಪ್ರೇರಿತವಾಯಿತು. ಚೇತನೆಯ ಮುಕ್ತಿಗೆ ಜೀವನವು ಮೊದಲ ಹೆಜ್ಜೆಯಾಯಿತು; ಮನಸ್ಸು ಎರಡನೆಯದು, ಆದರೆ ವಿಕಾಸ ಕ್ರಮವು ಮನಸ್ಸಿನೊಂದಿಗೆ ಅಂತ್ಯವಾಗುವುದಿಲ್ಲ, ಅದು ಯಾವುದೊಂದು ಮಹತ್ ಚೇತನ ಯಾವುದು ಆಧ್ಯಾತ್ಮಿಕ ಮತ್ತು ಅತಿಮಾಸವಾಗಿದೆಯೋ ಅದರೊಳಗೆ ಮುಕ್ತಿ ಹೊಂದಲು ಕಾಯುತ್ತಿದೆ. ವಿಕಾಸ ಕ್ರಮದ ಮುಂದಿನ ಹಂತವು ಖಚಿತವಾಗಿ ಅತಿಮಾನಸದ ಬೆಳವಣಿಗೆ ಮತ್ತು ಆತ್ಮ ಶಕ್ತಿಯೇ ಪ್ರಧಾನವಾಗಿರುವ ಸಚೇತ ಸತ್ತೆಯತ್ತವಿರಬೇಕು. ಏಕೆಂದರೆ ಆಗ ಮಾತ್ರ ವಸ್ತುಗಳಲ್ಲಿ ಅಡಕವಾಗಿರುವ ದಿವ್ಯತ್ವವು ತನ್ನನ್ನು ತಾನು ಸಂಪೂರ್ಣವಾಗಿ ಮುಕ್ತಗೊಳಿಸಬಹುದು ಮತ್ತು ಜೀವನವು ಪರಿಪೂರ್ಣತೆಯನ್ನು ಅಭಿವ್ಯಕ್ತಗೊಳಿಸಬಹುದಾಗಿದೆ.
ಆದರೆ ಹಿಂದಿನ ವಿಕಾಸದ ಹಂತದಲ್ಲಿ ಸಸ್ಯ ಮತ್ತು ಪ್ರಾಣಿ ಜೀವನದಲ್ಲಿ ಪ್ರಕೃತಿಯಿಂದ ಚೇತನ ರಹಿತವಾದ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗಿದ್ದರೂ, ಮಾನವನಲ್ಲಿ ಪ್ರಕೃತಿಯು ಉಪಕರಣದ ಸಚೇತ ಇಚ್ಛೆಯೊಂದಿಗೆ ವಿಕಾಸಹೊಂದಬಹುದಾಗಿದೆ. ಹೀಗಿದ್ದರೂ ಇದನ್ನು ಸಂಪೂರ್ಣವಾಗಿ ಮನಸ್ಸಿನ ಇಚ್ಛೆಯಿಂದಲೇ ಸಾಧಿಸಲಾಗದು, ಎಕೆಂದರೆ ಮನಸ್ಸು ಒಂದು ಹಂತವನ್ನು ತಲುಪಿದ ನಂತರ ಅದು ಒಂದು ವೃತ್ತದಲ್ಲಿ ಸುತ್ತಬಹುದಾಗಿದೆ. ಚೇತನೆಯ ಹೊರಳುವಿಕೆಯಿಂದ, ಮನಸ್ಸು ಉನ್ನತ ತತ್ವದಲ್ಲಿ ಪರಿವರ್ತಿತವಾಗುವಂತೆ ಒಂದು ಬದಲಾವಣೆಯಾಗಬೇಕು. ಪುರಾತನ ಮನೋವೈಜ್ಞಾನಿಕ ಶಿಸ್ತು ಮತ್ತು ಯೋಗದ ಅಭ್ಯಾಸದಿಂದ ಈ ಪದ್ದತಿಯನ್ನು ಕಂಡುಹಿಡಿಯಬೇಕು. ಹಿಂದೆ ಇದನ್ನು ಜಗತ್ತಿನಿಂದ ದೂರ ಹೋಗಿ, ಪರಮಾತ್ಮ ಅಥವಾ ಪರಬ್ರಹ್ಮನಲ್ಲಿ ಲೀನವಾಗುವುದನ್ನು ಪ್ರಯತ್ನಿಸಲಾಗಿದೆ. ಶ್ರೀ ಅರವಿಂದರು ಉಪದೇಶಿಸುವುದೆನೆಂದರೆ ಉನ್ನತ ತತ್ವಗಳ ಅವತರಣವು ಸಾಧ್ಯವಿದ್ದು ಅದು ಕೇವಲ ಆಧ್ಯಾತ್ಮಿಕ ಆತ್ಮವನ್ನು ಜಗದಿಂದ ಹೊರ ಹಾಕುವುದಲ್ಲದೆ ಅದನ್ನು ಜಗತಿನಲ್ಲಿ ಮುಕ್ತಗೊಳಿಸುತ್ತದೆ, ಮನಸ್ಸಿನ ಅಜ್ಞಾನ ಅಥವಾ ಅದರ ಸೀಮಿತ ಜ್ಞಾನವನ್ನು ಅತಿಮಾನಸ ಸತ್ಯ-ಚೇತನದಿಂದ ಬದಲಿಸುತ್ತದೆ ಇದು ಅಂತರ್ ಆತ್ಮದ ಯತೇಷ್ಠ ಉಪಕರಣವಾಗುವುದು ಮತ್ತು ಮಾನವನಿಗೆ ತನ್ನನ್ನು ತಾನು ಕ್ರಿಯಾತ್ಮಕವಾಗಿ ಮತ್ತು ಅಂತರಿಕವಾಗಿ ಕಂಡುಕೊಳ್ಳುವಂತೆ ಮತ್ತು ಇನ್ನೂ ಇರುವ ಪಶು ಮಾನವೀಯತೆಯಿಂದ ದಿವ್ಯವಂಶವಾಗುವಂತೆ ಮಾಡುತ್ತದೆ ಎಂಬುದು ಶ್ರೀ ಅರವಿಂದರ ಬೋಧನೆಯಾಗಿದೆ. ಯೋಗದ ಮನೋವೈಜ್ಞಾನಿಕ ಶಿಸ್ತನ್ನು ಆ ಅಂತ್ಯಕ್ಕಾಗಿ ಉಪಯೋಗಿಸಬಹುದು ಪರಿವರ್ತನೆ ಅಥವಾ ರೂಪಾಂತರ ಹೊಂದಲು ಸತ್ತೆಯ ಎಲ್ಲ ಭಾಗಗಳನ್ನು ತೆರೆಯುವುದರಿಂದ ಅಥವಾ ಇನ್ನೂ ಅಡಕವಾಗಿರುವ ಅತಿಮಾನಸ ತತ್ವದ ಅವತರಣ ಮತ್ತು ಕಾರ್ಯದಿಂದ.
ಆದಾಗ್ಯೂ ಇದನ್ನು ಒಂದೇ ಸಲ ಅಥವಾ ಅಲ್ಪ ಸಮಯದಲ್ಲಿ ಅಥವಾ ಯಾವುದೇ ತ್ವರಿತ ಅಥವಾ ಪವಾಡಮಯ ಪರಿವರ್ತನವಾಗಿ ಮಾಡಲಾಗದು. ಅತಿಮಾನಸ ಅವತರಣ ಸಾದ್ಯವಾಗುವ ಮುಂಚೆ ಅನ್ವೇಷಕನಿಗೆ ಅನೇಕ ಹಂತಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮನುಷ್ಯ ಬಹುತೇಕವಾಗಿ ತನ್ನ ಬಾಹ್ಯ ಮನಸ್ಸು, ಪ್ರಾಣ ಮತ್ತು ಶರೀರದಲ್ಲಿಯೇ ಜೀವಿಸುತ್ತಾನೆ, ಆದರೆೆ ಅವನಲ್ಲಿಯ ಉನ್ನತ ಸಾಧ್ಯತೆಗಳುಳ್ಳ ಅಂತರ್ ಸತ್ತೆಗೆ ಅವನು ಜಾಗೃತನಾಗಬೇಕು–ಏಕೆಂದರೆ ಅವನು ಈಗ ಇದರಿಂದ ಅತೀ ಅಲ್ಪ ಪ್ರಮಾಣದ ಪ್ರಭಾವವನ್ನು ಪಡೆಯುತ್ತಾನೆ ಮತ್ತು ಅದು ಅವನನ್ನು ಇನ್ನೂ ಹೆಚ್ಚಿನ ಸೌಂದರ್ಯ, ಸಾಮರಸ್ಯ, ಶಕ್ತಿ ಮತ್ತು ಜ್ಞಾನಗಳ ಸತತ ಅನ್ವೇಷಣೆಗೆ ಪ್ರೋತ್ಸಾಹ ನೀಡುತ್ತದೆ. ಆದ್ದರಿಂದ ಯೋಗದ ಮೊದಲ ಪ್ರಕ್ರಿಯೆಯು ಅಂತರ್ ಸತ್ತೆಯ ಕ್ಷೇತ್ರಗಳನ್ನು ತೆರೆಯುವುದಾಗಿದೆ ಮತ್ತು ಅಲ್ಲಿಂದ ಬಾಹ್ಯ ಜೀವನ ಮಾಡುವುದು, ಅವನ ಬಾಹ್ಯ ಜೀವನವನ್ನು ಅಂತರ್ ಜ್ಯೋತಿ ಮತ್ತು ಶಕ್ತಿಗಳಿಂದ ನಡೆಸುವುದು. ಹೀಗೆ ಮಾಡುವುದರಲ್ಲಿ ಅವನು ತನ್ನಲ್ಲಿ ತಾನು ಯಾವುದು ಮನ, ಪ್ರಾಣ ಮತ್ತು ದೇಹಗಳ ಹೊರ ಮಿಶ್ರಣವಾಗಿಲ್ಲವೋ ಆದರೆ ಅವುಗಳ ಹಿಂದಿರುವ ವಾಸ್ತವಿಕತೆ, ದಿವ್ಯಜ್ಯೋತಿಯ ಅಗ್ನಿಯಾದ ಆ ನಿಜ ಆತ್ಮವನ್ನು ಹುಡುಕಿಕೊಳ್ಳುತ್ತಾನೆ. ಅವನು ತನ್ನ ಆತ್ಮದಲ್ಲಿ ಮತ್ತು ಪರಿಶುದ್ಧಿಯಲ್ಲಿ ಜೀವಿಸಲು ಕಲಿಯಬೇಕು ಮತ್ತು ಅದರ ಸೆಳೆತದಿಂದ ಉಳಿದ ಪ್ರಕೃತಿಯು ಸತ್ಯದ ಕಡೆಗೆ ಹೊರಳುವಂತೆ ಮಾಡಬೇಕು. ತದನಂತರ ಮೇಲ್ಮಮುಖ ತೆರೆಯುವಿಕೆ ಮತ್ತು ಸತ್ತೆಯ ಉನ್ನತ ತತ್ವಗಳ ಅವತರಣಗಳು ಹಿಂಬಾಲಿಸುತ್ತವೆ. ಇಷ್ಟಾದರೂ ಒಂದೇ ಸಲಕ್ಕೆ ಸಂಪೂರ್ಣ ಅತಿಮಾನಸ ಜ್ಯೋತಿ ಮತ್ತು ಶಕ್ತಿಗಳಲ್ಲ. ಏಕೆಂದರೆ ಸಾಧಾರಣ ಮಾನವ ಮನಸ್ಸು ಮತ್ತು ಅತಿಮಾನಸ ಸತ್ಯ-ಚೇತನಗಳ ನಡುವೆ ಚೇತನಗಳ ಅನೇಕ ಸ್ತರಗಳಿವೆ. ಈ ಮಧ್ಯದ ಸ್ತರಗಳನ್ನು ತೆರೆಯಬೇಕಾಗುತ್ತದೆ ಮತ್ತು ಅವುಗಳ ಶಕ್ತಿಯನ್ನು ಮನ, ಪ್ರಾಣ ಮತ್ತು ಶರೀರದಲ್ಲಿ ಇಳಿಸಬೇಕಾಗುತ್ತದೆ. ತದನಂತರವೇ ಸತ್ಯ-ಚೇತನದ ಪೂರ್ಣ ಶಕ್ತಿಯು ಪ್ರಕೃತಿಯಲ್ಲಿ ಕಾರ್ಯಮಾಡುತ್ತದೆ. ಆದ್ದರಿಂದ ಈ ಸ್ವ-ಶಿಸ್ತು ಅಥವಾ ಸಾಧನೆಯು ದೀರ್ಘಕಾಲದ ಮತ್ತು ಕಠಿಣವಾಗಿದೆ, ಆದರೆ ಇದರ ಸ್ವಲ್ಪ ಮಾತ್ರವೇ ಅಧಿಕ ಲಾಭಕಾರಿಯಾಗಿದೆ ಏಕೆಂದರೆ ಅದು ಅಂತಿಮ ಮುಕ್ತಿ ಮತ್ತು ಪರಿಪೂರ್ಣತೆಯನ್ನು ಹೆಚ್ಚು ಸಾಧ್ಯಗೊಳಿಸುತ್ತದೆ.
ಹಳೆಯ ಪದ್ದತಿಯಲ್ಲಿನ ಅನೇಕ ಸಂಗತಿಗಳು ಪಥದಗುಂಟ ಸಾಗಲು ಅವಶ್ಯಕವಾಗಿವೆ–ಹೆಚ್ಚಿನ ವಿಸ್ತಾರತೆಗೆ ಮತ್ತು ಆತ್ಮದ ಅನುಭೂತಿ ಹಾಗೂ ಅನಂತತೆಗೆ ಮನದ ತೆರೆಯುವಿಕೆ ಯಾವುದನ್ನು ವಿಶ್ವ ಚೇತನವೆಂದು ಕರೆಯುವೆವೋ ಅದರೊಳಗೆ ಹೊರಹೊಮ್ಮುವಿಕೆ, ಆಶೆಗಳು ಮತ್ತು ಭಾವೋದ್ರೇಕಗಳ ಮೇಲೆ ಪ್ರಭುತ್ವ; ಬಾಹ್ಯ ವೈರಾಗ್ಯವು ಅವಶ್ಯಕವಾಗಿಲ್ಲ, ಆದರೆ ಆಶೆ ಮತ್ತು ಮಮತೆಗಳ ಮೇಲೆ ವಿಜಯ ಮತ್ತು ಶರೀರ ಮತ್ತು ಅದರ ಬೇಡಿಕೆಗಳು, ದುರಾಸೆಗಳು ಮತ್ತು ಪ್ರವೃತ್ತಿಗಳ ಮೇಲೆ ಪ್ರಭುತ್ವ ಅನಿವಾರ್ಯವಾಗಿದೆ. ಹಳೆಯ ಪದ್ದತಿಗಳ ಒಂದು ಸಂಯೋಜನೆಯಿದೆ; ವಾಸ್ತವಿಕತೆÀ ಮತ್ತು ಗೋಚರಗಳ ನಡುವೆ ಮನದ ವಿವೇಚನೆಯೊಂದಿಗೆ ಜ್ಞಾನ ಮಾರ್ಗ, ಭಕ್ತಿ, ಪ್ರೇಮ ಮತ್ತು ಸಮರ್ಪಣೆಗಳ ಹೃದಯದ ಮಾರ್ಗ ಮತ್ತು ಸ್ವ-ಆಸಕ್ತಿಗಳ ಉದ್ದೇಶಗಳನ್ನು ಅಹಂಕಾರದ ಬದಲಾಗಿ ಸತ್ಯದ ಕಡೆಗೆ ಮತ್ತು ಉನ್ನತ ವಾಸ್ತವಿಕತೆಯ ಸೇವೆಗಾಗಿ ಹೊರಳಿಸುವ ಕರ್ಮ ಮಾರ್ಗ. ಏಕೆಂದರೆ ಸಂಪೂರ್ಣ ಸತ್ತೆಗೆ ತರಬೇತಿಯನ್ನು ನೀಡಬೇಕಾಗುತ್ತದೆ ಇದರಿಂದ ಅದು ಯಾವಾಗ ಉನ್ನತ ಪ್ರಕಾಶ ಮತ್ತು ಶಕ್ತಿಗಳು ಪ್ರಕೃತಿಯಲ್ಲಿ ಕೆಲಸ ಮಾಡಲು ಸಾಧ್ಯವಾದಗ ಪ್ರತಿಕ್ರಿಯಿಸತ್ತದೆ ಮತ್ತು ಪರಿವರ್ತಿತವಾಗುತ್ತದೆ.
ಈ ಶಿಸ್ತಿನಲ್ಲಿ, ಗುರುವಿನ ಪ್ರೇರಣೆ, ಮತ್ತು ಕಠಿನ ಹಂತಗಳಲ್ಲಿ ಅವನ ನಿಯಂತ್ರಣ ಮತ್ತು ಅವನ ಸಾನ್ನಿಧ್ಯಗಳು ಅನಿವಾರ್ಯವಾಗಿವೆ–ಏಕೆಂದರೆ ಇಲ್ಲವಾದಲ್ಲಿ ಎಲ್ಲ ಸಾಧ್ಯತೆಗಳನ್ನು ತಡೆಹಿಡಿಯುವ ಎಡವಿಕೆ ಮತ್ತು ತಪ್ಪುಗಳ ರಹಿತ ಮುಂದೆಸಾಗುವುದು ಅಸಾಧ್ಯವಾಗುತ್ತದೆ. ಯಾರು ಉನ್ನತ ಶ್ರೇಣಿಗಳಿಗೆ ಏರಿರುವರೋ ಅವರು ಗುರು ಮತ್ತು ಬಹುವಾಗಿ ಅವನನ್ನು ಸಾಕಾರರೂಪ ಅಥವಾ ದಿವ್ಯಪ್ರತಿನಿಧಿಯೆಂದು ಪರಿಗಣಿಸಲಾಗುತ್ತದೆ. ಅವನು ತನ್ನ ಬೋಧನೆಯಿಂದ ಸಹಾಯ ಮಾಡುವುದಲ್ಲದೆ ತನ್ನ ಪ್ರೇರಣೆ ಮತ್ತು ಉದಾಹರಣೆಯಿಂದ ಅದರಲ್ಲಿಯೂ ತನ್ನ ಸ್ವ-ಅನುಭವಗಳನ್ನೂ ಉಳಿದವರಿಗೆ ತಿಳಿಸುವ ಶಕ್ತಿಯಿಂದ ಹೆಚ್ಚು ಪ್ರಭಾವಬೀರುತ್ತಾನೆ.
ಇದು ಶ್ರೀ ಅರವಿಂದರ ಬೋಧನೆ ಮತ್ತು ಆಚರಣೆಯ ಪದ್ದತಿ. ಯಾವುದೇ ಒಂದು ಧರ್ಮವನ್ನು ಬೆಳೆಸುವುದಾಗಲೀ ಅಥವಾ ಹಳೆಯ ಧರ್ಮಗಳನ್ನು ಮಿಶ್ರಿಸುವುದಾಗಲೀ ಅಥವಾ ಯಾವದೇ ಹೊಸ ಧರ್ಮವನ್ನು ನಿರ್ಮಿಸುವುದಾಗಲೀ ಶ್ರೀ ಅರವಿಂದರ ಉದ್ದೇಶವಲ್ಲ, ಏಕೆಂದರೆ ಇವುಗಳಲ್ಲಿಯ ಯಾವುದೊಂದು ಅವರ ಮುಖ್ಯ ಉದ್ದೇಶದಿಂದ ದೂರಹೋಗುವುದಾಗಿದೆ. ಅವರ ಯೋಗದ ಏಕೈಕ ಗುರಿಯೆಂದರೆ ಆಂತರಿಕ ಸ್ವ-ವೃದ್ಧಿ ಇದರಿಂದ ಪ್ರತಿಯೊಬ್ಬ ಸಾಧಕನೂ ಎಲ್ಲರಲ್ಲಿಯೂ ಇರುವ ಏಕೈಕ ಆತ್ಮವನ್ನು ಪರಿಶೋಧಿಸಲಿ ಮತ್ತು ಮನಕ್ಕಿಂತ ಉನ್ನತವಾದ ಆಧ್ಯಾತ್ಮಿಕ ಮತ್ತು ಅತಿಮಾನಸ ಚೇತನೆಗೆ ಆರೋಹಿಸಲಿ ಇದು ಮಾನವ ಪ್ರಕೃತಿಯನ್ನು ದಿವ್ಯವಾಗಿ ಪರಿವರ್ತಿಸುವುದು.
ಶ್ರೀ ಅರವಿಂದರು
ಶಿಷ್ಯನಿಗೆ ಬರೆದ ಪತ್ರ, ಫೆಬ್ರುವರಿ ೧೯೩೪
ಉಲ್ಲೇಖ; CWSA ಸಂಪುಟ ೩೬ ಆತ್ಮ ಚರಿತ್ರಾತ್ಮಕ ಟಿಪ್ಪಣಿಗಳು, ಪುಟ; ೫೪೭-೫೫೦
ಅನುವಾದ; ಶಂಕರ, ಶ್ರೀ ಅರವಿಂದಾಶ್ರಮ ಪಾಂಡಿಚೇ
ಯೂಟ್ಯೂಬ್ನಲ್ಲಿ ವೀಕ್ಷಿಸಿ (YouTube): https://youtu.be/cXtCazKPMT0